ಪ್ಲ್ಯಾಕೋಡರ್ಮಿ
ಗತವಂಶಿ ಮೀನುಗಳ ವರ್ಗ. ಸೈಲ್ಯೂರಿಯನ್ ಕಾಲದ ಅಂತ್ಯದಲ್ಲಿ ಉಗಮಿಸಿದ ಇವು ಡಿವೋನಿಯನ್ ಕಾಲದಲ್ಲಿ ತಮ್ಮ ಉಚ್ಛಾಯಸ್ಧಿತಿಯನ್ನು ತಲುಪಿ ಪೇಲಿಯೊeóÉೂೀಯಿಕ್ ಯುಗದ ಅಂತ್ಯದ ವೇಳೆ ಗತಿಸಿಹೋದವು. ಈ ಮೀನುಗಳ ಪ್ರಧಾನ ಲಕ್ಷಣಗಳು ಇಂತಿವೆ: ಬಾಯಿ ಪ್ರಾಚೀನ ರೀತಿಯ ದವಡೆಗಳಿಂದ ಕೂಡಿರುವುದು (ಪ್ರಪ್ರಥಮವಾಗಿ ದವಡೆಗಳು ಕಾಣಿಸಿಕೊಂಡಿದ್ದು ಈ ಮೀನುಗಳಲ್ಲಿ ಎಂದು ಬಗೆಯಲಾಗಿದೆ); ದೇಹದ ಸುತ್ತ ಬಲವಾದ ಎಲುಬಿನ ಕವಚ ಇರುವುದು; ಮ್ಯಾಂಡಿಬುಲಾರ್ ಮತ್ತು ಹಯಾಯ್ಡ್ ಕಮಾನುಗಳ ಮಧ್ಯೆ ಒಂದು ಕಿವಿರುರಂದ್ರ ಇರುವುದು (ಹಯಾಯ್ಡ್ ಕಮಾನಿಗೂ ದವಡೆಗಳಿಗೂ ನಿಕಟ ಸಂಬಂಧವಿರಲಿಲ್ಲ); ದವಡೆಯ ತೂಗುವಿಕೆ ಆಟೋಸ್ಟೈಲಿಕ್ ರೀತಿಯದು; ಜೋಡಿರೆಕ್ಕೆಗಳ ಇರುವು; ಆದಿಯ ಪ್ಲ್ಯಾಕೋಡರ್ಮಿ ಮೀನುಗಳು ಅಸ್ಟ್ರಕೋಡರ್ಮಿ ಮೀನುಗಳಂತೆ ಸಿಹಿನೀರುವಾಸಿಗಳಾಗಿದ್ದು ಆಮೇಲೆ ಸಮುದ್ರಕ್ಕೆ ವಲಸೆ ಹೋದುವೆನ್ನಲಾಗಿದೆ.

	ಪ್ಲ್ಯಾಕೋಡರ್ಮಿ ವರ್ಗವನ್ನು 4 ಗಣಗಳನ್ನಾಗಿ ವಿಂಗಡಿಸಲಾಗಿದೆ; ಅಕ್ಯಾಂ ತೋಡಿಯೈ. ಆತ್ರ್ರೊಡೈರ, ಆ್ಯಂಟ್ರಿಆರ್ಕ ಮತ್ತು ಸ್ಟೀಗೋಕೆಫಾಲಿ.

	1 ಅಕ್ಯಾಂತೋಡಿಯೈ: ಪ್ಲ್ಯಾಕೋಡಮ ಗುಂಪಿನ ಆದಿಯ ಪ್ರಾಣಿಗಳು. ಇವುಗಳನ್ನು ರೂಢಿಯಾಗಿ ಮುಳ್ಳಿನ ಶಾರ್ಕ್‍ಗಳೆಂದು ಕರೆಯುತ್ತಾರೆ. ಇವು ಡಿವೋನಿಯನ್ ಮತ್ತು ಸೈಲ್ಯೂರಿಯನ್ ಕಾಲಗಳಲ್ಲಿ ಸಿಹಿನೀರಿನಲ್ಲಿ ವಾಸಿಸುತ್ತಿದ್ದುವು. ಇವು ಬಹಳ ಸಣ್ಣಗಾತ್ರದ ಮೀನುಗಳು (ಇವುಗಳ ಉದ್ದ ಕೇವಲ ಕೆಲವು ಸೆಂಟಿಮೀಟರಗಳಿತ್ತು). ಅತಿ ದೊಡ್ಡ ಮೀನು ಸುಮಾರು ಮೂವತ್ತು ಸೆಂಮೀ. ಉದ್ದ ಇತ್ತೆನ್ನಲಾಗಿದೆ. ದೇಹ ಕದಿರಿನಾಕಾರದ್ದಾಗಿತ್ತು. ಮೂತಿ ಮೊಂಡಾಗಿತ್ತು. ಈ ಮೀನುಗಳಲ್ಲಿ ಒಂದು ಅಥವಾ ಎರಡು ಮೇಲಿನ ಒಂಟಿ ರೆಕ್ಕೆಗಳೂ ಗುದದ ಒಂದು ಈಜುರೆಕ್ಕೆಯೂ ಇದ್ದುವು. ಪ್ರತಿ ಈಜುರೆಕ್ಕೆಯ ಮುಂಭಾಗದಲ್ಲಿ ಪ್ರಬಲ ಮುಳ್ಳು ಒಂದಿತ್ತು. ಜೊತೆಗೆ ಅನೇಕ ಸಣ್ಣ ಪಾಶ್ರ್ವ ರೆಕ್ಕೆಗಳು ಅಥವಾ ಜೋಡಿ ಈಜುರೆಕ್ಕೆಗಳು ಜೋಡಣೆಗೊಂಡಿದ್ದವು. ಇದರಿಂದಾಗಿ ಈ ಗುಂಪಿನ ಮೀನುಗಳಲ್ಲಿ ರೆಕ್ಕೆಗಳು ದೇಹದ ಅವಿರತ ಅಂಶಗಳಾಗಿದ್ದುವು ಎಂದು ಅಭಿಪ್ರಾಯಪಡಲಾಗಿದೆ. ಈ ಮೀನುಗಳ ದೇಹ ವಜ್ರಾಕೃತಿಯ ಎಲುಬಿನ ಹುರುಪೆಗಳಿಂದ ಆವೃತವಾಗಿತ್ತು. ಹುರುಪೆಗಳ ಮೇಲ್ಭಾಗದಲ್ಲಿ ಗನಾಯ್ನ್ ವಸ್ತುವಿನ ಪದರ ಇತ್ತು. ತಲೆಯ ಮೇಲ್ಬಾಗದ ಹುರುಪೆಗಳು ದೊಡ್ಡ ಗಾತ್ರದವಾಗಿದ್ದುವು. ಮೇಲುದವಡೆ ತಲೆಬುರುಡೆಗೆ ನೇರವಾಗಿ ಅಂಟಿಕೊಂಡಿತ್ತು. ಹಯಾಯ್ಡ್ ಯಾವ ರೀತಿಯಲ್ಲೂ ಬದಲಾವಣೆಹೊಂದದ ಬ್ರ್ಯಾಂಕಿಯಲ್ ಕಮಾನು ಆಗಿತ್ತು. ಉದಾ: ಕ್ಲಿಮಾಟಿಸ್.

	2 ಆತ್ರ್ರೊಡೈರ: ಈ ಗಣದ ಮೀನುಗಳ ದೇಹದ ಕವಚ ಎರಡು ಭಾಗಗಳಾಗಿದ್ದು ಒಂದು ಭಾಗ ತಲೆಯನ್ನೂ ಇನ್ನೊಂದು ಭಾಗ ಮುಂಡವನ್ನೂ ಆವರಿಸಿದ್ದುವು. ಈ ಎರಡು ಭಾಗಗಳು ಒಂದು ಜೊತೆ ಕೀಲುಗಳಿಂದ ಕೂಡಿಕೊಂಡಿದ್ದುವು. ಆದ್ದರಿಂದ ಈ ಮೀನುಗಳಿಗೆ ಕೀಲುಕತ್ತಿನ ಮೀನುಗಳು ಎಂಬ ಹೆಸರಿದೆ. ಇವುಗಳ ದವಡೆಗಳಲ್ಲಿ ವಿಚಿತ್ರವಾದ ಎಲುಬಿನ ಫಲಕಗಳಿದ್ದುವು. ಉದಾ: ಡಿಸಿಕ್ತಿಸ್.

	3 ಆ್ಯಂಟಿಆರ್ಕ: ಈ ಮೀನುಗಳ ದೇಹದ ಹೊದಿಕೆ ಆತ್ರ್ರೊಡೈರ ಮೀನುಗಳಲ್ಲಿದ್ದ ಹಾಗೆಯೇ ಇತ್ತು. ಇವು ಸಣ್ಣ ಗಾತ್ರದ ಮೀನುಗಳು. ಇವುಗಳ ತಲೆ ಸಣ್ಣದಾಗಿದ್ದು, ದವಡೆಗಳು ಆಹಾರವನ್ನು ಕಚ್ಚಿ ತಿನ್ನುವುದಕ್ಕೆ ಸಹಾಯಕವಾಗಿದ್ದುವು. ಎದೆಯ ಪಕ್ಕಗಳಲ್ಲಿ ಎರಡು ಖಂಡಗಳನ್ನೊಳಗೊಂಡ ಒಂದು ಜೊತೆ ಮೂಳೆ ರೆಕ್ಕೆಯ ಅಂಗಗಳಿದ್ದುವು. ಉದಾ. ಬೋತ್ರಿಯೊಲೆಪಿಸ್.

	4 ಸ್ಟೀಗೋಕೆಫಾಲಿ: ಈ ಮೀನುಗಳಲ್ಲಿ ದೇಹದ ಕವಚ ಕ್ಷೀಣಗೊಂಡಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ಅತ್ರ್ರೊಡೈರ, ಆ್ಯಂಟಿಆರ್ಕ ಮತ್ತು ಸ್ಟೀಗೋಕೆಫಾಲಿ ಮೀನುಗಳು ಸಹ ಶಾರ್ಕ್ ರೀತಿಯ ಮೀನುಗಳು. ಇವು ಡಿವೋನಿಯನ್ ಅಂತ್ಯದಲ್ಲಿ ಗತಿಸಿಹೋದವು. ಆದರೆ ಅಕ್ಯಾಂತೋಡಿಯೈ ಮೀನುಗಳು ಪರ್ಮಿಯನ್ ಕಾಲದವರೆಗೂ ಉಳಿದಿದ್ದವು. ಕಾಲಾನಂತರದಲ್ಲಿ ಇವುಗಳ ಎಲುಬಿನ ಕವಚ ಕ್ಷೀಣಗೊಳ್ಳುತ್ತ ಬಂದು ಇವುಗಳಿಂದ ಮೃದ್ವಸ್ಥಿಮೀನುಗಳು ವಿಕಸಿಸಿದವು ಎನ್ನಲಾಗಿದೆ.
(ಎನ್.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ